ಬಿಂದು -	
 	ವೇದ ಮತ್ತು ಆಗಮ ಸಾಹಿತ್ಯದಲ್ಲಿ ಬರುವ ವಿಶಿಷ್ಟ ಪದ. ಅನೇಕಾರ್ಥಗಳಿವೆ. ಘನೀಭೂತ ಶಕ್ತಿ ಆಭಿವ್ಯಕ್ತವಾಗುವುದಕ್ಕೆ ಮುಂಚಿನ ಅಂದರೆ ಅಹಂ ಇದಂ ಪ್ರಕಾಶದ ಪೂರ್ವಸ್ಥಿತಿ. ಇದನ್ನು ಚಿದ್ಛನ ಎಂದು ವ್ಯವಹರಿಸಲಾಗಿದೆ. ಅಹಂ ಎಂಬಲ್ಲಿ ಅ=ಶಿವ, ಹ=ಶಕ್ತಿ, ಶಿವ ಶಕ್ತಿಯ ಮೂಲಕ ಪ್ರಪಂಚ ರೂಪದಲ್ಲಿ ಅಭಿವ್ಯಕ್ತವಾಗುವುದಕ್ಕೆ ಮುಂಚೆ ಅವಿಭಾಗವೇದನಾತ್ಮಕ ಬಿಂದುರೂಪತಯಾ ಅವಿಭಕ್ತವಾದ ಪ್ರಕಾಶ, ತೇಜಸ್ಸು ಸುರಿಸಿ ಪ್ರವಾಹ ರೂಪನಾಗಿ ಚಿಮ್ಮಿದರೆ ನಾದ. ನಾದವೇ ಮುಂದಿನ ಚಲನವಲನಗಳಿಗೆ ಕಾರಣ. ಇದು ಕ್ರಿಯಾಶಕ್ತಿಯ ವಿಲಾಸ. 

	ಚರಾಚರಸೃಷ್ಟಿಗೆ ಕಾರಣವಾದ ಪರಶಿವ ಬ್ರಹ್ಮದ ನೈಜಸ್ಥಿತಿಯನ್ನು ಸಹಜ ಎಂದು ಕರೆಯಲಾಗಿದೆ. ಈ ಸಹಜವನ್ನೇ ಶೂನ್ಯ, ನಿಶ್ಶೂನ್ಯ. ಬಯಲು ನಿರವಯಲು ಎಂದು ಶರಣರು ಕರೆದಿದ್ದಾರೆ. ಇದು ಸರ್ವಶಕ್ತಿಯನ್ನು ಅಳವಡಿಸಿಕೊಂಡ ಪರಮಾತ್ಮನ ಸ್ವಶಕ್ತಿಕ್ಷೋಭೆಯಲ್ಲದ ಸ್ಥಿತಿಯನ್ನು ವರ್ಣಿಸುತ್ತದೆ. ಅದೇ ಶೂನ್ಯ, ನಿಶ್ಯೂನ್ಯ, ಬಯಲು. ಅಲ್ಲಿ ಕಾಲವಿಲ್ಲ, ಕಲೆಯಿಲ್ಲ, ಕಲ್ಪವಿಲ್ಲ, ಸೃಷ್ಟಿಸ್ಥಿತಿಲಯಗಳಿಲ್ಲ. ಏನೇನು ಇಲ್ಲದ ಆ ಸ್ಥಿತಿ ಬಯಲೇ ಅದು ನಿಶ್ಯೂನ್ಯವೆ, ಆದರೆ ಅದು ಏನೂ ಇಲ್ಲದ ಬಯಲಲ್ಲ. ಸಾಮಾನ್ಯ ಶೂನ್ಯವಲ್ಲ. ಎಲ್ಲವನ್ನೂ ಒಳಗೊಂಡಿರುವ ನಿಶ್ಯೂನ್ಯ. ತರಂಗಗಳನ್ನು ಅಡಗಿಸಿಕೊಂಡ ಸಮುದ್ರ ಸ್ವಸ್ಥವಾಗಿರುವಂತೆ ತನ್ನಲ್ಲಿ ತಾನು ಲೀನವಾದ ಸ್ಥಿತಿ. 

	ಈ ಸ್ಥಿತಿಯನ್ನು ಸರ್ವಶೂನ್ಯ ನಿರಾಲಂಬ ಎಂದು ಶರಣರು ಕರೆದಿದ್ದಾರೆ. ಆಗ ಸರ್ವಶೂನ್ಯ ಮತ್ತು ತನ್ನ ಘನತೆಯನ್ನು ತಾನರಿಯದೆ ಇದಿರರಿಯದೆ ಏನೇನೂ ಅರಿಯದೆ ತಾನೇ ತಾನಾಗಿದ್ದಿತು ಎಂಬುದನ್ನು ಸಿದ್ಧಲಿಂಗ ಶಿವಯೋಗಿಗಳು ನಿರಾಲಂಬ, ಎಂದು ಕರೆದಿದ್ದಾರೆ. ಅದು ಅಸ್ತಿತ್ವವಿಲ್ಲದ ಶೂನ್ಯವಲ್ಲ ಅದು ಎಲ್ಲವನ್ನೂ ಒಳಗೊಂಡ ಪರಿಪೂರ್ಣ. ಮತ್ತೊಂದಕ್ಕೆಡೆಯಿಲ್ಲದೆ ತಾನೇ ತಾನಾಗಿ ಎಲ್ಲವನ್ನೂ ತುಂಬಿಕೊಂಡಿರುವ ಶೂನ್ಯ ಅದು.  

ನಿರಾಮಯಂ ನಿರಾಕಾರಂ ನಿರ್ಗುಣಂ ನಿರ್ಮಲಶಿವಂ
ತಸ್ಮಾಲ್ಲಿಂಗಂ ಪರಂಬ್ರಹ್ಮ ಸಚ್ಚಿದಾನಂದಲಕ್ಪ್ಷಣಂ ಸೂಕ್ಷ್ಮಾಗಮ

ಎಂಬ ಸ್ಥಿತಿ ಖುಗ್ವೇದದ ನಾಸದೀಯ ಸೂಕ್ತ ಈ ಸ್ಥಿತಿಯನ್ನು ಪೂರ್ವದಲ್ಲಿ ಸದಸತ್ತುಗಳಾಗಲಿ, ಆಕಾಶಾಂತರಿಕ್ಷಗಳಾಗಲಿ, ಹಗಲು ರಾತ್ರಿಗಳಾಗಲಿ ಅಮೃತ ಮೃತ್ಯುಗಳಾಗಲಿ ಇರದ ಸ್ಥಿತಿ ಎನ್ನಲಾಗಿದೆ. ಇದನ್ನೆ ಪ್ರಭುದೇವರ 'ಗುಹೇಶ್ವರಾ ನೀನೊಬ್ಬನೇ ಇದ್ದೆಯಲ್ಲಾ ಇಲ್ಲದಂತೆ, ಎಂಬ ಮಾತು ಸ್ವಷ್ಟ ಪಡಿಸುತ್ತದೆ. ಇದನ್ನು ನಾಸದೀಯ ಸೂಕ್ತದಲ್ಲಿ 'ಅಸೀದವಾತಂ ಸ್ವಧಯಾತದೇಕಂ' ಎಂದು ವರ್ಣಿಸಲಾಗಿದೆ. ವಾಯುವೇ ಇಲ್ಲದ ಆ ಸ್ಥಿತಿಯಲ್ಲಯೂ ಅದು ತನ್ನಲ್ಲಿದ್ದ ಸ್ವಶಕ್ತಿ (ಸ್ವಧಯಾ) ಸಹಾಯದಿಂದ ಆಸೀತ್ ಚೈತನ್ಯ ಸ್ಫುರಣಿಯುಳ್ಳದ್ದಾಗಿತ್ತು ಎಂದು ಹೇಳಿದೆ. ಯೋಗಶಿಖೋಪನಿಷತ್ತಿನಲ್ಲಿ

ಬಿಂದುನಾದ ಕಲಾಜ್ಯೋತೀ ರಮಿಂದು ಧ್ರುವತಾರಕಂ
ಶಾಂತಂ ಚ ತದತೀತಂ ಚ ಪರಂ ಬ್ರಹ್ಮ ತದುಚ್ಯತೇ

ಎಂಬಲ್ಲಿ ಬಿಂದು ಪದ ಪರಬ್ರಹ್ಮ ಎಂಬ ಅರ್ಥದಲ್ಲಿದೆ. ಇದೇ ಉಪನಿಷತ್ತು 'ಯೋನಾದ: ಸವೈಬಿಂದು: ತದ್ಬೈಚಿತ್ತಂ ಪ್ರಕೀರ್ತಯೇತ್ ಎಂದು ಹೇಳಿ ನಾದ ಬಿಂದು ಚಿತ್ತಗಳಿಗೆ ಐಕ್ಯ ಸೂಚಿಸಿದೆ. ಮತ್ತೊಂದು ಕಡೆ `ಬಿಂದುನಾದ ಮಹಾಲಿಂಗ ವಿಷ್ಣು ಲಕ್ಷ್ಮೀನಿಕೇತನಂ' ಎಂದು ಹೇಳಿ ಶರೀರಗತವಾದ ಆಧಾರ ಸ್ವಾಧಿಷ್ಠಾನ ಮುಂತಾದ ಷಟ್ ಚಕ್ರಗಳಿಗೆ ಮೂಲವಾದ ಆಧಾರದಿಂದಲೇ ಬಿಂದು, ನಾದ, ಹಂಸಗಳು ಉತ್ಪನ್ನವಾಗುವವೆಂದು ಹೇಳಿದೆ. ಯೋಗಚೂಡಾಮಣಿ ಉಪನಿಷತ್ತಿನಲ್ಲಿ-`ಬಿಂದು ಮೂಲಶರೀರಾಣಿ ಶಿರಾಸ್ತತ್ರ ಪ್ರತಿಷ್ಠಿತಾ: ಎಂದು ಶರೀರಗಳಿಗೆ ಬಿಂದುವೇ ಮೂಲವೆಂದು ಸೂಚಿಸಿದೆ. ಬಿಂದುಬ್ರಹ್ಮಾರಜ: ಶಕ್ತಿ: `ಬಿಂದುರಿಂದೊರಜೋ ರವಿ: 1 ಉಭಯೋ: ಸಂಗಮಾದೇವ ಪ್ರಾಪ್ಯತೇ ಪರಮಂ ಪದಂ 1 ಎಂದರೆ ಬಿಂದುವೇ ಬ್ರಹ್ಮ ರಜಸ್ಸು ಶಕ್ತಿ, ಇವೆರಡರ ಸಂಯೋಗದಿಂದ ಪರಮ ಪದವಿಯು ಲಭಿಸುತ್ತದೆ. ಧ್ಯಾನಬಿಂದು ಉಪನಿಷತ್ತು, ಸೀತೋಪನಿಷತ್ತು, ರಾಮರಹಸ್ಯೋಪನಿಷತ್ತು, ತಾರಸಾಕೋಪನಿಷತ್ತುಗಳಲ್ಲಿ ವಿವಿದಾರ್ಥಗಳಲ್ಲಿ ಬಿಂದು ಪದವನ್ನು ವಿಶ್ಲೇಷಿಸಲಾಗಿದೆ. 

	ಇನ್ನು ಶಿವಾಗಮಗಳಲ್ಲಿ ಕಡೆಯದಾದ ವಾತುಲಶುದ್ಧಾಖ್ಯತಂತ್ರ ವರ್ಣಭೇದ ಪಟಲದಲ್ಲಿ ಪರಾ ಸೂಕ್ಷ್ಮಾ ಎನಿಸಿರುವ ಶಿವತತ್ತ್ವದಿಂದ ಬಿಂದು ಉದಿಸಿತು. ಬಿಂದುವಿನಿಂದ ನಾದ, ನಾದದಿಂದ ಶಕ್ತಿ, ಶಕ್ತಿಯಿಂದ ಶಬ್ದ, ಶಬ್ದದಿಂದ ವಾಗ್ಛವ, ವಾಗ್ಛವದಿಂದ ಕಲೆಗಳು, ಕಲೆಗಳಿಂದ ವಿಕಲೆಗಳು, ಅದರಿಂದ ವಾಚಕ ಮಂತ್ರಗಳುದಿಸಿದುವು. ಇದು ವಾಚಕಸೃಷ್ಟಿಕ್ರಮ. ಪರಾಶಕ್ತಿ ಬಿಂದು ರೂಪ, ನಾದ ಅದರ ಆದಿಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿರೂಪವಾಗಿದೆ ಎಂದು ಹೇಳಿ ಮುಂದೆ ಅವುಗಳ ಲಕ್ಷಣಗಳನ್ನೂ ಬಿಂದು ಸ್ವರೂಪವನ್ನೂ ವಿವರಿಸಲಾಗಿದೆ.  			 							(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ